1

1 ನಮ್ಮ ರಕ್ಷಕನಾದ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕರ್ತನಾದ ಯೇಸು ಕ್ರಿಸ್ತನ ಆಜ್ಞಾನುಸಾರ ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನು 2 ನಂಬಿಕೆಯ ವಿಷಯದಲ್ಲಿ ನನ್ನ ಸ್ವಂತಮಗನಾಗಿರುವ ತಿಮೊಥೆಯನಿಗೆ ನಮ್ಮ ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಆಗಲಿ. 3 ನಾನು ಮಕೆದೋನ್ಯಕ್ಕೆ ಹೋದಾಗ ನೀನು ಎಫೆಸ ದಲ್ಲಿ ಇದ್ದುಕೊಂಡು ಅವರು ಬೇರೆ ಯಾವ ಬೋಧನೆ ಯನ್ನು ಉಪದೇಶಿಸಬಾರದೆಂತಲೂ 4 ಕಲ್ಪನಾ ಕಥೆ ಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ ಆಜ್ಞಾಪಿಸಬೇಕೆಂಬದಾಗಿ ನಾನು ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತೇನೆ. ಅಂಥ ಕಥೆಗಳೂ ವಂಶಾವಳಿಗಳೂ ವಿವಾದಕ್ಕೆ ಆಸ್ಪದವಾಗಿವೆಯೇ ಹೊರತು ನಂಬಿಕೆ ಯಿಂದುಂಟಾಗುವ ದೈವಭಕ್ತಿಯನ್ನು ವೃದ್ಧಿಮಾಡುವ 5 ಶುದ್ಧ ಹೃದಯದಿಂದಲೂ ಒಳ್ಳೇಮನಸ್ಸಾಕ್ಷಿ ಯಿಂದಲೂ ನಿಷ್ಕಪಟವಾದ ನಂಬಿಕೆಯಿಂದಲೂ ಉಂಟಾಗುವ ಪ್ರೀತಿಯೇ ಆಜ್ಞೆಯ ಅಂತ್ಯವಾಗಿದೆ. 6 ಕೆಲವರು ಈ ಗುರಿ ತಪ್ಪಿ ವ್ಯರ್ಥವಾದ ವಿಚಾರ ಗಳಿಗೆ ತಿರುಗಿಕೊಂಡಿದ್ದಾರೆ; 7 ಅವರು ನ್ಯಾಯ ಪ್ರಮಾಣದ ಉಪದೇಶಕರಾಗಿರಬೇಕೆಂದಿದ್ದರೂ ತಾವು ಹೇಳುವದಾಗಲೀ ತಾವು ದೃಢವಾಗಿ ಮಾತನಾಡುವ ವಿಷಯವಾಗಲೀ ಇಂಥದ್ದೆಂದು ತಿಳಿಯದವರಾಗಿ ದ್ದಾರೆ. 8 ಒಬ್ಬನು ನ್ಯಾಯಪ್ರಮಾಣವನ್ನು ನ್ಯಾಯ ಸಮ್ಮತವಾಗಿ ಉಪಯೋಗಿಸುವದಾದರೆ ಅದು ಒಳ್ಳೇ ದೆಂದು ನಾವು ಬಲ್ಲೆವು. 9 ನ್ಯಾಯಪ್ರಮಾಣವು ನೀತಿ ವಂತರಿಗೋಸ್ಕರ ಅಲ್ಲ, ಆದರೆ ಅದು ಅಕ್ರಮ ಗಾರರಿಗೂ ಅವಿಧೇಯರಿಗೂ ಭಕ್ತಿಹೀನರಿಗೂ ಪಾಪಿಷ್ಠ ರಿಗೂ ಅಶುದ್ಧರಿಗೂ ಅಪವಿತ್ರಮಾಡುವವರಿಗೂ ತಂದೆತಾಯಿಗಳನ್ನು ಕೊಲ್ಲುವವರಿಗೂ ನರಹತ್ಯ ಮಾಡುವವರಿಗೂ 10 ಜಾರರಿಗೂ ಪುರುಷಗಾಮಿ ಗಳಿಗೂ ನರಚೋರರಿಗೂ ಸುಳ್ಳುಗಾರರಿಗೂ ಅಬದ್ಧ ಪ್ರಮಾಣಿಕರಿಗೂ ಸ್ವಸ್ಥಬೋಧನೆಗೆ ಪ್ರತಿಕೂಲವಾಗಿ ಬೇರೆ ಏನಾದರೂ ಇದ್ದರೆ ಅದನ್ನು ಮಾಡುವವರಿಗೂ ನೇಮಕ ವಾಗಿದೆಯೆಂದು ನಮಗೆ ತಿಳಿದದೆ. 11 ಈ ಬೋಧನೆಯು ಸ್ತುತ್ಯನಾದ ದೇವರ ಮಹಿಮೆಯ ಸುವಾರ್ತೆಗೆ ಅನುಸಾರವಾಗಿದೆ. ಈ ಸುವಾರ್ತೆಯು ನನ್ನ ವಶಕ್ಕೆ ಕೊಡಲ್ಪಟ್ಟಿತು. 12 ನನಗೆ ಬಲವನ್ನು ದಯಪಾಲಿಸಿದಾತನು ನಮ್ಮ ಕರ್ತನಾದ ಕ್ರಿಸ್ತ ಯೇಸುವೇ; ಆತನು ನನ್ನನ್ನು ನಂಬಿಗಸ್ತನೆಂದು ಎಣಿಸಿ ಈ ಸೇವೆಯಲ್ಲಿ ನೇಮಿಸಿ ಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರ ಸಲ್ಲಿಸುತ್ತೇನೆ. 13 ಮೊದಲು ದೇವದೂಷಕನೂ ಹಿಂಸಕನೂ ಕೇಡು ಮಾಡುವವನೂ ಆಗಿದ್ದ ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು. 14 ನಮ್ಮ ಕರ್ತನ ಕೃಪೆಯು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆ ಮತ್ತು ಪ್ರೀತಿಯೊಂದಿಗೆ ಅತ್ಯಧಿಕವಾಯಿತು. 15 ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂದು ಹೇಳುವದು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ; ಆ ಪಾಪಿಗಳಲ್ಲಿ ನಾನೇ ಮುಖ್ಯನು. 16 ಹೇಗಿದ್ದರೂ ಇನ್ನು ಮುಂದೆ ನಿತ್ಯ ಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ ದೃಷ್ಟಾಂತವಿರಬೇಕೆಂದು ಯೇಸು ಕ್ರಿಸ್ತನು ಮೊದಲು ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣದೀರ್ಘ ಶಾಂತಿಯನ್ನು ತೋರ್ಪಡಿಸಿದನು. 17 ನಿತ್ಯನಾದ ಅರಸನೂ ನಿರ್ಲಯನೂ ಅದೃಶ್ಯನೂ ಆಗಿರುವ ಜ್ಞಾನಿಯಾದ ಒಬ್ಬನೇ ದೇವರಿಗೆ ಘನವೂ ಮಹಿಮೆಯೂ ಎಂದೆಂದಿಗೂ ಇರಲಿ. ಆಮೆನ್‌. 18 ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮುಂಚೆ ಉಂಟಾದ ಪ್ರವಾದನೆಗಳ ಪ್ರಕಾರ ನೀನು ಅವುಗಳಿಂದ ಒಳ್ಳೇ ಯುದ್ಧವನ್ನು ನಡಿಸಬೇಕೆಂದು ನಿನಗೆ ಆಜ್ಞಾಪಿಸುತ್ತೇನೆ. 19 ನಂಬಿಕೆಯನ್ನೂ ಒಳ್ಳೇ ಮನಸ್ಸಾಕ್ಷಿಯನ್ನೂ ಹಿಡಿದುಕೋ; ಕೆಲವರು ನಂಬಿಕೆ ಯನ್ನು ತಳ್ಳಿಬಿಟ್ಟು ಅದರ ವಿಷಯದಲ್ಲಿ ಹಡಗು ಒಡೆದ ವರಂತೆ ಇದ್ದಾರೆ; 20 ಹುಮೆನಾಯನೂ ಅಲೆಕ್ಸಾಂದ ರನೂ ಅವರಲ್ಲಿದ್ದಾರೆ. ಇವರು ದೇವದೂಷಣೆ ಮಾಡ ಬಾರದೆಂಬದನ್ನು ಕಲಿತುಕೊಳ್ಳುವಂತೆ ನಾನು ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.

2

1 ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿ ಗೋಸ್ಕರವೂ ಅರಸರುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವೆಗಳನ್ನೂ ಕೃತಜ್ಞತಾಸ್ತುತಿ ಗಳನ್ನೂ ಮಾಡಬೇಕೆಂದು ಎಚ್ಚರಿಸುತ್ತೇನೆ. 2 ಹೀಗೆ ನಾವು ಶಾಂತಿ ಸಮಾಧಾನಗಳಿಂದ ಕೂಡಿದ ಜೀವನ ವನ್ನು ಪೂರ್ಣ ಭಕ್ತಿಯಿಂದಲೂ ಗೌರವದಿಂದಲೂ ನಡಿಸುವದಕ್ಕಾಗುವದು. 3 ಯಾಕಂದರೆ ಇದು ನಮ್ಮ ರಕ್ಷಕನಾದ ದೇವರ ದೃಷ್ಟಿಯಲ್ಲಿ ಒಳ್ಳೇದಾಗಿಯೂ ಅಂಗೀಕರಿಸತಕ್ಕದ್ದಾಗಿಯೂ ಅದೆ. 4 ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರ ಬೇಕೆಂಬದು ಆತನ ಚಿತ್ತವಾಗಿದೆ. 5 ಯಾಕಂದರೆ ದೇವರು ಒಬ್ಬನೇ;ದೇವರಿಗೂ ಮನಷ್ಯರಿಗೂ ಮಧ್ಯಸ್ಥನು ಒಬ್ಬನೇ; ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ; 6 ಆತನು ಎಲ್ಲರಿಗೋಸ್ಕರ ವಿಮೋಚನೆಯ ಕ್ರಯವಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು; ಇದೇ ತಕ್ಕಕಾಲದಲ್ಲಿ ಹೇಳ ಬೇಕಾದ ಸಾಕ್ಷಿಯಾಗಿದೆ. 7 ಆ ಸಾಕ್ಷಿಯನ್ನು ಪ್ರಸಿದ್ಧಿ ಪಡಿಸುವದಕ್ಕಾಗಿಯೇ ನಾನು ಸಾರುವವನಾಗಿಯೂ ಅಪೊಸ್ತಲನಾಗಿಯೂ ನಂಬಿಕೆಯಿಂದ ಮತ್ತು ಸತ್ಯದಿಂದ ಅನ್ಯಜನರಿಗೆ ಬೋಧಿಸುವವನಾಗಿಯೂ ನೇಮಿಸಲ್ಪ ಟ್ಟೆನು. (ಇದನ್ನು ಸುಳ್ಳಾಡದೆ ಕ್ರಿಸ್ತನಲ್ಲಿ ಸತ್ಯವಾಗಿ ಹೇಳುತ್ತೇನೆ.) 8 ಆದದರಿಂದ ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ಸಂದೇಹವೂ ಇಲ್ಲದೆ ಪವಿತ್ರವಾದ ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ನಾನು ಅಪೇಕ್ಷಿಸು ತ್ತೇನೆ. 9 ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ ಸ್ವಸ್ಥಬುದ್ಧಿಯುಳ್ಳವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತುಗಳು ಬೆಲೆಯುಳ್ಳ ವಸ್ತ್ರ ಇವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ 10 (ದೇವ ಭಕ್ತೆಯರೆನಿಸಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ) ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು. 11 ಸ್ತ್ರೀಯು ಮೌನವಾಗಿದ್ದು ಪೂರ್ಣ ವಿಧೇಯಳಾಗಿ ಕಲಿಯಬೇಕು. 12 ಆದರೆ ಉಪದೇಶ ಮಾಡುವದ ಕ್ಕಾಗಲೀ ಪುರುಷರ ಮೇಲೆ ಅಧಿಕಾರ ನಡಿಸುವದ ಕ್ಕಾಗಲೀ ಸ್ತ್ರೀಗೆ ನಾನು ಅಪ್ಪಣೆಕೊಡುವದಿಲ್ಲ; ಆಕೆಯು ಮೌನವಾಗಿರಬೇಕು. 13 ಮೊದಲು ನಿರ್ಮಿತನಾದ ವನು ಆದಾಮನಲ್ಲವೇ, ಆಮೇಲೆ ಹವ್ವಳು; 14 ಇದ ಲ್ಲದೆ ಆದಾಮನು ವಂಚನೆಗೆ ಒಳಬೀಳಲಿಲ್ಲ, ಸ್ತ್ರೀಯು ವಂಚನೆಗೆ ಒಳಬಿದ್ದು ಅಪರಾಧಿಯಾದಳು. 15 ಆದರೂ ಅವರು ಸ್ವಸ್ಥ ಬುದ್ಧಿಯಿಂದೊಡಗೂಡಿದ ನಂಬಿಕೆಯ ಲ್ಲಿಯೂ ಪ್ರೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ನೆಲೆಗೊಂಡಿದ್ದರೆ ಆಕೆಯು ಮಗುವನ್ನು ಹೆರುವದರಲ್ಲಿ ರಕ್ಷಣೆ ಹೊಂದುವಳು.

3

1 ಸಭಾಧ್ಯಕ್ಷನ ಉದ್ಯೋಗವನ್ನು ಪಡಕೊಳ್ಳ ಬೇಕೆಂದು ಆಶಿಸುವವನು ಒಳ್ಳೇ ಕೆಲಸ ವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ಸತ್ಯವಾದ ದ್ದಾಗಿದೆ. 2 ಸಭಾಧ್ಯಕ್ಷನು ದೋಷಾರೋಪಣೆಯಿಲ್ಲ ದವನೂ ಏಕಪತ್ನಿಯುಳ್ಳವನು ಜಿತೇಂದ್ರಿಯನೂ ಸ್ವಸ್ಥಚಿತ್ತನೂ ಮಾನಸ್ಥನೂ ಅತಿಥಿಸತ್ಕಾರಮಾಡು ವವನೂ ಬೋಧಿಸುವದರಲ್ಲಿ ಪ್ರವೀಣನೂ ಆಗಿರತಕ್ಕದ್ದು. 3 ಅವನು ಕುಡಿಯುವವನಾಗಿರಬಾರದು. ಹೊಡೆದಾಡುವವನಾಗಿರಬಾರದು, ದ್ರವ್ಯಾಶೆಯುಳ್ಳವ ನಾಗಿರಬಾರದು; ಆದರೆ ತಾಳ್ಮೆಯುಳ್ಳವನೂ ಕುತರ್ಕ ಮಾಡದವನೂ ದುರಾಶೆಯಿಲ್ಲದವನೂ ಆಗಿರಬೇಕು. 4 ಪೂರ್ಣ ಗೌರವದಿಂದ ತನ್ನ ಮಕ್ಕಳನ್ನೂ ಅಧೀನದಲ್ಲಿ ಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವ ನಾಗಿರಬೇಕು. 5 (ಸ್ವಂತ ಮನೆಯವರನ್ನು ಆಳುವದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಮರಿ ಸುವನು)? 6 ಅವನು ಹೊಸಬನಾಗಿರಬಾರದು; ಅಂಥ ವನಾದರೆ ಉಬ್ಬಿಕೊಂಡು ಸೈತಾನನ ಶಿಕ್ಷಾವಿಧಿಗೆ ಒಳಗಾಗುವನು. 7 ಇದಲ್ಲದೆ ಅವನು ನಿಂದೆಗೆ ಗುರಿ ಯಾಗದಂತೆಯೂ ಸೈತಾನನ ಉರ್ಲಿಗೆ ಸಿಕ್ಕಿಬೀಳ ದಂತೆಯೂ ಹೊರಗಿನವರಿಂದ ಒಳ್ಳೇಸಾಕ್ಷಿಯನ್ನು ಹೊಂದಿದವನಾಗಿರತಕ್ಕದ್ದು. 8 ಅದೇ ರೀತಿಯಾಗಿ ಸಭಾಸೇವಕರು ಗೌರವವುಳ್ಳ ವರಾಗಿರಬೇಕು; ಅವರು ಎರಡು ನಾಲಿಗೆಯುಳ್ಳವರಾಗಿ ರಬಾರದು. ಹೆಚ್ಚು ದ್ರಾಕ್ಷಾರಸ ಕುಡಿಯುವವರೂ ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ 9 ನಂಬಿಕೆಯ ಮರ್ಮವನ್ನು ಶುದ್ಧ ಮನಸ್ಸಾಕ್ಷಿಯಲ್ಲಿ ಹಿಡಿದುಕೊಂಡವರಾಗಿರಬೇಕು. 10 ಇದಲ್ಲದೆ ಅವರು ಸಹ ಮೊದಲು ಪರೀಕ್ಷಿಸಲ್ಪಡಬೇಕು; ತರುವಾಯ ಅವರು ದೋಷರಹಿತರಾಗಿ ಕಂಡುಬಂದರೆ ಸಭಾ ಸೇವಕರ ಉದ್ಯೋಗವನ್ನು ನಡಿಸಲಿ. 11 ಹಾಗೆಯೇ ಅವರ ಹೆಂಡತಿಯರು ಗೌರವವುಳ್ಳವರಾಗಿರಬೇಕು; ಚಾಡಿ ಹೇಳದವರೂ ಸ್ವಸ್ಥಬುದ್ಧಿಯುಳ್ಳವರೂ ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರೂ ಆಗಿರತಕ್ಕದ್ದು. 12 ಸಭಾ ಸೇವಕರು ಏಕಪತ್ನಿಯುಳ್ಳವರೂ ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ಆಳುವವರೂ ಆಗಿರಬೇಕು. 13 ಸಭಾಸೇವಕರಾಗಿ ಚೆನ್ನಾಗಿ ಕೆಲಸಮಾಡಿದವರು ತಮಗೆ ಒಳ್ಳೇ ಪದವಿಯನ್ನೂ ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹು ಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ. 14 ಬೇಗನೆ ನಿನ್ನ ಬಳಿಗೆ ಬರುವನೆಂಬ ನಿರೀಕ್ಷೆಯಿಂದ ನಾನು ನಿನಗೆ ಈ ವಿಷಯಗಳನ್ನು ಬರೆದಿದ್ದೇನೆ. 15 ಆದರೆ ಒಂದು ವೇಳೆ ನಾನು ತಡಮಾಡಿದರೂ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ಗೊತ್ತಾಗಬೇಕು. 16 ದೇವಭಕ್ತಿಯ ಮರ್ಮವು ಮಹತ್ವವುಳ್ಳದ್ದೆಂಬದು ತರ್ಕವಿಲ್ಲದ್ದು, ಅದು ಯಾವದಂದರೆ--ದೇವರು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮಸಂಬಂಧವಾಗಿ ನೀತಿವಂತನೆಂದು ನಿರ್ಣಯಿಸಲ್ಪಟ್ಟನು; ದೂತ ರಿಗೆ ಕಾಣಿಸಿಕೊಂಡನು; ಅನ್ಯಜನರಿಗೆ ಸಾರಲ್ಪಟ್ಟನು; ಲೋಕದಲ್ಲಿ ನಂಬಲ್ಪಟ್ಟನು; ಮಹಿಮೆಗೆ ಸೇರಿಸಲ

4

1 ಕಡೇಕಾಲಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ನಂಬಿಕೆಯಿಂದ ತೊಲಗಿಹೋಗುವ ರೆಂದು ಆತ್ಮನು ಸ್ಪಷ್ಟವಾಗಿ ಹೇಳುತ್ತಾನೆ. 2 ಅವರು ಕಪಟದಲ್ಲಿ ಸುಳ್ಳಾಡುವವರೂ ತಮ್ಮ ಮನಸ್ಸಾಕ್ಷಿಯ ಮೇಲೆ ಕಾಸಿದ ಕಬ್ಬಿಣದಿಂದ ಬರೆ ಹಾಕಲ್ಪಟ್ಟವರೂ ಆಗಿದ್ದು 3 ಮದುವೆಯಾಗಬಾರದೆಂತಲೂ ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿಕೊಂಡಿದ್ದಾರೋ ಅವರು ಕೃತಜ್ಞತಾಸ್ತುತಿ ಮಾಡಿ ತಿನ್ನುವದಕ್ಕೋಸ್ಕರ ದೇವರು ಉಂಟು ಮಾಡಿದ ಆಹಾರವನ್ನು ತಿನ್ನಬಾರ ದೆಂತಲೂ ಆಜ್ಞಾಪಿಸುತ್ತಾರೆ. 4 ದೇವರ ಪ್ರತಿಯೊಂದು ಸೃಷ್ಟಿಯೂ ಒಳ್ಳೇದಾಗಿದೆ; ಸ್ತೋತ್ರ ಮಾಡಿ ತೆಗೆದು ಕೊಳ್ಳುವ ಪಕ್ಷಕ್ಕೆ ಯಾವದನ್ನೂ ನಿರಾಕರಿಸಬಾರದು. 5 ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಅದು ಪವಿತ್ರವಾಗುತ್ತದಲ್ಲಾ. 6 ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ ನೀನು ಅನುಸರಿಸುವ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಪೋಷಣೆ ಹೊಂದುವವರಾಗಿ ಯೇಸು ಕ್ರಿಸ್ತನ ಒಳ್ಳೇ ಸೇವಕನಾಗಿರುವಿ. 7 ಆದರೆ ಅಜ್ಜೀಕಥೆಗಳಂತಿರುವ ಅಶುದ್ಧವಾದ ಆ ಕಥೆಗಳನ್ನು ನಿರಾಕರಿಸಿ ನೀನು ದೇವ ಭಕ್ತಿಯ ವಿಷಯದಲ್ಲಿಯೇ ಸಾಧನೆ ಮಾಡಿಕೋ. 8 ದೇಹಸಾಧನೆಯು ಸ್ವಲ್ಪ ಮಟ್ಟಿಗೆ ಲಾಭಕರವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಲಾಭಕರವಾದದ್ದು; ಆದಕ್ಕೆ ಈಗಲೂ ಮುಂದೆ ಬರುವದಕ್ಕೂ ಜೀವಾಗ್ದಾನ ಉಂಟು. 9 ಈ ಮಾತು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ. 10 ಆದದರಿಂದ ಇದಕ್ಕಾಗಿ ನಾವು ಕಷ್ಟಪಡುವವರೂ ನಿಂದೆಯನ್ನನುಭವಿಸುವವರೂ ಆಗಿದ್ದೇವೆ; ಯಾಕಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕನಾಗಿರುವ ಜೀವವುಳ್ಳ ದೇವರನ್ನು ನಾವು ನಂಬಿ ದ್ದೇವೆ. 11 ಈ ವಿಷಯಗಳನ್ನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು. 12 ಯೌವನಸ್ಥನೆಂದು ನಿನ್ನನ್ನು ಅಸಡ್ಡೆ ಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬು ವವರಿಗೆ ನಡೆ ನುಡಿ ಪ್ರೀತಿ ಆತ್ಮ ನಂಬಿಕೆ ಶುದ್ಧತ್ವದಲ್ಲಿ ನೀನೇ ಮಾದರಿಯಾಗಿರು. 13 ನಾನು ಬರುವ ತನಕ ಓದುವದರಲ್ಲಿಯೂ ಎಚ್ಚರಿಸುವದರಲ್ಲಿಯೂ ಬೋಧಿ ಸುವದರಲ್ಲಿಯೂ ಲಕ್ಷ್ಯಕೊಡು. 14 ನಿನ್ನಲ್ಲಿರುವ ವರವನ್ನು ಅಲಕ್ಷ್ಯಮಾಡಬೇಡ; ಸಭೆಯ ಹಿರಿಯರು ಪ್ರವಾದನೆಯಿಂದ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ಅದು ನಿನಗೆ ಕೊಡಲ್ಪಟ್ಟಿತಲ್ಲಾ. 15 ಈ ವಿಷಯಗಳನ್ನು ಧ್ಯಾನಿಸು ವವನಾಗಿರು; ನಿನ್ನನ್ನು ಸಂಪೂರ್ಣವಾಗಿ ಅವುಗಳಿಗೆ ಒಪ್ಪಿಸಿಕೊಡು; ಹೀಗೆ ನಿನಗಾದ ಲಾಭವು ಎಲ್ಲರಿಗೂ ತೋರಿಬಂದೀತು. 16 ನಿನ್ನ ವಿಷಯದಲ್ಲಿಯೂ ಉಪ ದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಇವುಗಳಲ್ಲಿ ನಿರತನಾಗಿರು; ಹೀಗೆ ಮಾಡುವದರಿಂದ ನೀನು ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.

5

1 ವೃದ್ಧನನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿಹೇಳು. ಯೌವನಸ್ಥರನ್ನು ಸಹೋದರರೆಂದೂ 2 ವೃದ್ಧಸ್ತ್ರೀಯರನ್ನು ತಾಯಂದಿ ರೆಂದೂ ಯೌವನ ಸ್ತ್ರೀಯರನ್ನು ಪೂರ್ಣ ಪವಿತ್ರತೆ ಯಿಂದ ಸಹೋದರಿಯರೆಂದೂ ಎಣಿಸಿ ಅವರವರಿಗೆ ಬುದ್ಧಿಹೇಳು. 3 ನಿಜವಾಗಿಯೂ ವಿಧವೆಯಾಗಿರುವವರನ್ನು ಗೌರ ವಿಸು; ಅವರು ವಿಧವೆಯರಾಗಿದ್ದಾರಲ್ಲಾ. 4 ಆದರೆ ಯಾವ ವಿಧವೆಗಾದರೂ ಮಕ್ಕಳಾಗಲಿ, ಮೊಮ್ಮಕ್ಕಳಾ ಗಲಿ, ಇದ್ದರೆ ಅವರೇ ಮೊದಲು ತಮ್ಮ ಮನೆಯಲ್ಲಿ ಭಕ್ತಿ ತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪ ಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಯೋಗ್ಯವಾದದ್ದೂ ಮೆಚ್ಚಿಕೆಯಾದದ್ದೂ ಆಗಿದೆ. 5 ನಿಜವಾಗಿಯೂ ದಿಕ್ಕಿಲ್ಲದ ವಿಧವೆಯು ದೇವರ ಮೇಲೆ ನಿರೀಕ್ಷೆಯನ್ನಿಟ್ಟು ಹಗಲಿರುಳು ವಿಜ್ಞಾಪನೆಗಳ ಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು. 6 ಆದರೆ ಭೋಗಿಯಾಗಿರುವ ವಿಧವೆಯು ಬದುಕಿರು ವಾಗಲೂ ಸತ್ತವಳೇ. 7 ಅವರು ನಿಂದೆಗೆ ಗುರಿಯಾಗ ದಂತೆ ಇವುಗಳನ್ನು ಆಜ್ಞಾಪಿಸು. 8 ಯಾವನಾದರೂ ಸ್ವಂತದವರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ನಂಬಿಕೆಯನ್ನು ಅಲ್ಲಗಳೆ ದವನು ನಂಬದವನಿಗಿಂತ ಕೆಟ್ಟವನೂ ಆಗಿದ್ದಾನೆ. 9 ವಯಸ್ಸಿನಲ್ಲಿ ಅರುವತ್ತಕ್ಕೆ ಕಡಿಮೆಯಿದ್ದ ವಿಧವೆಯರನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬೇಡ. ಅಂಥವಳಾ ದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳೂ 10 ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡ ವಳೂ ಆಗಿರಬೇಕು; ಆಕೆಯು ಮಕ್ಕಳನ್ನು ಸಾಕಿದವಳಾ ಗಲಿ ಅತಿಥಿಸತ್ಕಾರವನ್ನು ಮಾಡಿದವಳಾಗಲಿ ಪರಿಶುದ್ಧರ ಪಾದಗಳನ್ನು ತೊಳೆದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯ ಮಾಡಿದವಳಾಗಲಿ ಎಲ್ಲಾ ಸತ್ಕಾರ್ಯಗಳಲಿ ಆಸಕ್ತಿಯುಳ್ಳವಳಾಗಲಿ ಆಗಿರ 11 ಆದರೆ ಯೌವನಸ್ಥ ವಿಧವೆಯರನ್ನು ಲೆಕ್ಕಕ್ಕೆ ಸೇರಿಸಬೇಡ; ಯಾಕಂದರೆ ಅವರು ಕ್ರಿಸ್ತನಿಗೆ ಒಳಗಾಗಲೊಲ್ಲದೆ ಮದಿಸಿ ಮದುವೆ ಮಾಡಿಕೊಳ್ಳಬೇಕೆಂದು ಇಷ್ಟಪ ಟ್ಟಾರು. 12 ಅಂಥವರು ತಮ್ಮ ಮೊದಲಿನ ನಂಬಿಕೆಯನ್ನು ತೊರೆದು ದಂಡನೆಗೆ ಗುರಿಯಾಗಿದ್ದಾರೆ. 13 ಇದಲ್ಲದೆ ಅವರು ಮನೆಯಿಂದ ಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ; ಮೈಗಳ್ಳರಾಗುವದ ಲ್ಲದೆ ಹರಟೆ ಮಾತನ್ನಾಡುವರು ಮತ್ತು ಇತರರ ಕೆಲಸ ದಲ್ಲಿ ಕೈಹಾಕುವವರಾಗಿ ಆಡಬಾರದ ಮಾತುಗಳನ್ನಾಡು ತ್ತಾರೆ. 14 ಆದದರಿಂದ ಯೌವನಸ್ಥ ವಿಧವೆಯರು ಮದುವೆ ಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯ ಕೆಲಸ ನಡಿಸುವದೇ ನನ್ನ ಅಪೇಕ್ಷೆ; ಹಾಗೆ ಮಾಡುವದ ರಿಂದ ವಿರೋಧಿಯ ನಿಂದೆಗೆ ಆಸ್ಪದಕೊಡದೆ ಇರುವರು. 15 ಇಷ್ಟರೊಳಗೆ ಕೆಲವರು ದಾರಿಬಿಟ್ಟು ಸೈತಾನನನ್ನು ಹಿಂಬಾಲಿಸಿದ್ದಾರೆ. 16 ನಂಬುವವರಾದ ಪುರುಷನ ಇಲ್ಲವೆ ಸ್ತ್ರೀಯ ಅಧೀನತೆಯಲ್ಲಿ ವಿಧವೆಯರಿದ್ದರೆ ಅವರೇ ಅವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯಮಾಡಬೇಕಾಗಿರುವದರಿಂದ ವಿಧವೆಯರು ಆ ಭಾರವನ್ನು ಸಭೆಯ ಮೇಲೆ ಹಾಕಬಾರದು. 17 ಚೆನ್ನಾಗಿ ಅಧಿಕಾರ ನಡಿಸುವ ಹಿರಿಯರನ್ನು, ಅವ ರೊಳಗೆ ವಿಶೇಷವಾಗಿ ವಾಕ್ಯದಲ್ಲಿಯೂ ಬೋಧನೆ ಯಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು. 18 ಕಣತುಳಿ ಯುವ ಎತ್ತಿನ ಬಾಯಿ ಕಟ್ಟಬಾರದೆಂತಲೂ--ಕೆಲಸ ದವನು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆಂತಲೂ ಬರಹದಲ್ಲಿ ಹೇಳಿದೆಯಲ್ಲಾ. 19 (ಸಭೆಯ) ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ತೆಗೆದು ಕೊಳ್ಳಬೇಡ. 20 ಪಾಪಮಾಡುವವರನ್ನು ಎಲ್ಲರ ಮುಂದೆಯೇ ಗದರಿಸು; ಇದರಿಂದ ಮಿಕ್ಕಾದವರಿಗೂ ಭಯವುಂಟಾಗುವದು. 21 ನೀನು ವಿಚಾರಿಸುವದಕ್ಕೆ ಮೊದಲೇ ತಪ್ಪು ಹೊರಿಸದೆಯೂ ಪಕ್ಷಪಾತದಿಂದ ಏನೂ ಮಾಡದೆಯೂ ಇವುಗಳನ್ನು ಕೈಕೊಳ್ಳಬೇಕೆಂದು ದೇವರ ಮುಂದೆಯೂ ಕರ್ತನಾದ ಯೇಸು ಕ್ರಿಸ್ತನ ಮುಂದೆಯೂ ಆಯಲ್ಪಟ್ಟಿರುವ ದೂತರ ಮುಂದೆಯೂ ಖಂಡಿತವಾಗಿ ನಾನು ಹೇಳುತ್ತೇನೆ. 22 ಅವಸರದಿಂದ ಯಾರ ಮೇಲೆಯೂ ಹಸ್ತಾರ್ಪಣೆ ಮಾಡಬೇಡ; ಮತ್ತು ಇತರರ ಪಾಪಗಳಲ್ಲಿ ಪಾಲುಗಾರನಾಗದೆ ನೀನು ುದ್ಧನಾಗಿರುವ ಹಾಗೆ ನೋಡಿಕೋ 23 ಇನ್ನು ಮೇಲೆ ನೀರನ್ನು ಮಾತ್ರ ಕುಡಿಯುವವನಾಗಿರದೆ ನಿನ್ನ ಹೊಟ್ಟೆಯ ನಿಮಿತ್ತವಾಗಿಯೂ ನಿನಗೆ ಆಗಾಗ್ಗೆ ಉಂಟಾ ಗುವ ಬಲಹೀನತೆಗಳಿಗಾಗಿಯೂ ದ್ರಾಕ್ಷಾರಸವನ್ನು ಸ್ವಲ್ಪವಾಗಿ ತೆಗೆದುಕೋ. 24 ಕೆಲವರ ಪಾಪಗಳು ತೀರ್ಪಿಗೆ ಮೊದಲೇ ಬಹಿರಂಗವಾಗುತ್ತವೆ; ಕೆಲವರ ಪಾಪಗಳು ತರುವಾಯ ಹಿಂಬಾಲಿಸುತ್ತವೆ. 25 ಅದರಂತೆಯೇ ಕೆಲವರ ಒಳ್ಳೇ ಕ್ರಿಯೆಗಳು ಮೊದಲೇ ಪ್ರತ್ಯಕ್ಷವಾಗಿರುತ್ತವೆ. ಪ್ರತ್ಯಕ್ಷವಾಗದಿರುವವುಗಳು ಮರೆ ಯಾಗಿರಲಾರವು.

6

1 ದೇವರ ನಾಮಕ್ಕೂ ಆತನ ಬೋಧನೆಗೂ ದೂಷಣೆ ಉಂಟಾಗದಂತೆ ನೊಗದ ಅಧೀನದಲ್ಲಿರುವ ಸೇವಕರೆಲ್ಲರೂ ತಮ್ಮ ಸ್ವಂತ ಯಜಮಾನರನ್ನೂ ಎಲ್ಲಾ ಮಾನಕ್ಕೂ ಯೋಗ್ಯರೆಂದೆ ಣಿಸಲಿ. 2 ವಿಶ್ವಾಸಿಗಳಾದ ಯಜಮಾನರಿರುವವರು, ಆ ಯಜಮಾನರನ್ನು ಸಹೋದರರೆಂದು ತಾತ್ಸಾರ ಮಾಡದೆ ಆದಾಯದಲ್ಲಿ ಪಾಲು ಹೊಂದುವವರೂ ನಂಬುವವರೂ ಪ್ರಿಯರೂ ಆಗಿದ್ದಾರೆಂದು ತಿಳಿದು ಅವರಿಗೆ ಹೆಚ್ಚಾದ ಸೇವೆ ಮಾಡಬೇಕು. ಇವುಗಳನ್ನು ಬೋಧಿಸಿ ಎಚ್ಚರಿಸು. 3 ಯಾವನಾದರೂ ಬೇರೆ ವಿಧವಾದ ಉಪದೇಶ ವನ್ನು ಮಾಡಿ ಅಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸ್ವಸ್ಥವಾದ ಮಾತುಗಳಿಗೂ ಭಕ್ತ್ಯನುಸಾರವಾದ ಬೋಧನೆಗೂ ಸಮ್ಮತಿಸದೆ ಹೋದರೆ 4 ಅಂಥವನು ಒಂದನ್ನೂ ತಿಳಿಯದೆ ಕುತರ್ಕ ವಾಗ್ವಾದಗಳನ್ನು ಮಾಡುವ ಭ್ರಾಂತಿಯಲ್ಲಿದ್ದು ಅಹಂಕಾರಿಯಾಗಿದ್ದಾನೆ. ಇವುಗಳಿಂದ ಹೊಟ್ಟೇಕಿಚ್ಚು ಜಗಳ ದೂಷಣೆ ದುಸ್ಸಂಶಯ ಇವುಗಳು ಉಂಟಾಗುತ್ತವೆ. 5 ಇದ್ದಲ್ಲದೆ ಬುದ್ದಿಗೆಟ್ಟು ಸತ್ಯವಿಹೀನರಾಗಿದ್ದು ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ವ್ಯರ್ಥ ವಾದ ವಿವಾದಗಳು ಉಂಟಾಗುತ್ತವೆ. ಇಂಥವರಿಂದ ದೂರವಾಗಿರ್ರಿ. 6 ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ. 7 ನಾವು ಲೋಕದೊಳಗೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ನಿಶ್ಚಯವಾಗಿ ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. 8 ಆದದರಿಂದ ಅನ್ನವಸ್ತ್ರಗಳುಳ್ಳವರಾಗಿ ಅವುಗಳಿಂದ ತೃಪ್ತರಾಗಿರೋಣ. 9 ಆದರೆ ಐಶ್ವರ್ಯವಂತರಾಗ ಬೇಕೆಂದು ಮನಸ್ಸು ಮಾಡುವವರು ಶೋಧನೆಯಲ್ಲಿಯೂ ಉರ್ಲಿನಲ್ಲಿಯೂ ಸಿಕ್ಕಿಕೊಂಡು ಅನೇಕ ಬುದ್ಧಿಹೀನತೆಯ ಮತ್ತು ಹಾನಿಕರವಾದ ದುರಾಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ನಾಶನಗಳಲ್ಲಿ ಮುಳುಗಿಸುತ್ತವೆ. 10 ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ನಂಬಿಕೆಯಿಂದ ತಪ್ಪಿಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಾವೇ ತಿವಿಸಿ ಕೊಳ್ಳುತ್ತಾರೆ. 11 ಓ ದೇವರ ಮನುಷ್ಯನೇ, ನೀನಾದರೋ ಇವುಗಳಿಂದ ದೂರ ಓಡಿಹೋಗು; ನೀತಿ ಭಕ್ತಿ ನಂಬಿಕೆ ಪ್ರೀತಿ ತಾಳ್ಮೆ ಸಾತ್ವಿಕತ್ವ ಇವುಗಳನ್ನು ಅನುಸರಿಸು. 12 ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿಯೇ ನೀನು ಕರೆಯಲ್ಪಟ್ಟಿದ್ದೀ. ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೇ ಅರಿಕೆಯನ್ನು ಮಾಡಿದ್ದೀಯಲ್ಲಾ. 13 ಎಲ್ಲರನ್ನು ಬದುಕಿಸುವ ದೇವರ ಮುಂದೆಯೂ ಪೊಂತ್ಯ ಪಿಲಾತನ ಮುಂದೆ ಶ್ರೇಷ್ಠ ಅರಿಕೆಯನ್ನು ಸಾಕ್ಷೀಕರಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳುವದೇನಂದರೆ-- 14 ನಮ್ಮ ಕರ್ತನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವ ತನಕ ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ನೀನು ಕಾಪಾಡಬೇಕು. 15 ಸ್ತುತಿ ಹೊಂದತಕ್ಕ ಒಬ್ಬನೇ ಸರ್ವ ಶಕ್ತನು. ತನ್ನ ಸಮಯಗಳಲ್ಲೇ ಆತನನ್ನು ಪ್ರತ್ಯಕ್ಷ ಪಡಿಸುವನು; ಆ ಸರ್ವಶಕ್ತನು ರಾಜಾಧಿರಾಜನೂ ಕರ್ತರ ಕರ್ತನೂ ಆಗಿದ್ದಾನೆ; 16 ಆತನೊಬ್ಬನೇ ಅಮರತ್ವವುಳ್ಳವನೂ ಯಾರೂ ಸವಿಾಪಿಸಲಾರದಂತ ಬೆಳಕಿನಲ್ಲಿ ವಾಸಿಸುವಾತನೂ ಆಗಿದ್ದಾನೆ; ಯಾವ ಮನುಷ್ಯನೂ ಆತನನ್ನು ಕಾಣಲಿಲ್ಲ; ಯಾರೂ ಕಾಣ ಲಾರರು; ಆತನಿಗೆ ಮಾನವೂ ನಿತ್ಯಾಧಿಕಾರವೂ ಇರಲಿ. ಆಮೆನ್‌. 17 ಈ ಲೋಕದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿ ಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ಭರವಸ ವನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲ ವನ್ನೂ ಹೇರಳವಾಗಿ ದಯಪಾಲಿಸುವ ಜೀವವುಳ್ಳ ದೇವರ ಮೇಲೆ ಭರವಸವನ್ನಿಡಬೇಕೆಂತಲೂ 18 ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲುಕೊಡುವದರಲ್ಲಿ ಸಿದ್ಧವಾಗಿ ರುವವರೂ ಪರೋಪಕಾರ ಮಾಡುವವರೂ ಆಗಿದ್ದು. 19 ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥ ವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂತಲೂ ನಿತ್ಯಜೀವವನ್ನು ಹಿಡಿದುಕೊಳ್ಳುವವರಾಗಿರ ಬೇಕೆಂತಲೂ ಅವರಿಗೆ ಆಜ್ಞಾಪಿಸು. 20 ಓ ತಿಮೊಥೆಯನೇ, ಅಪಭ್ರಷ್ಟವಾದ ವ್ಯರ್ಥ ಮಾತುಗಳಿಗೂ ಸುಳ್ಳು ಹೆಸರುಳ್ಳ ಜ್ಞಾನದ ತರ್ಕ ಗಳಿಗೂ ತಪ್ಪಿಸಿಕೊಂಡು ನಿನ್ನ ವಶಕ್ಕೆ ಕೊಟ್ಟಿರುವದನು ಕಾಪಾಡು. 21 ಕೆಲವರು ಆ ಸುಳ್ಳಾದ ಜ್ಞಾನವನ್ನು ಹೇಳಿಕೊಂಡು ನಂಬಿಕೆಯಿಂದ ತಪ್ಪಿಹೋದರು. ಕೃಪೆಯು ನಿಮ್ಮೊಂದಿಗಿರಲಿ. ಆಮೆನ್‌.